ಲಕ್ನೋ: 48 ವರ್ಷದ ವ್ಯಕ್ತಿಯೊಬ್ಬ 7 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಪಪ್ಪು ರೈ ಅತ್ಯಾಚಾರ ಎಸಗಿದ ಕಾಮುಕ. ಗೋರಖ್ಪುರ್ ಜಿಲ್ಲೆಯಲ್ಲಿ ಶುಕ್ರವಾರ ಘಟನೆ ನಡೆದಿದ್ದು, ಆರೋಪಿಯನ್ನು ಸಿಕ್ರಿಗಂಜ್ ಪೊಲೀಸರು ಬಂಧಿಸಿದ್ದಾರೆ.
ಪಪ್ಪು ಕೊಲೆಯಾದ ಬಾಲಕಿಯ ತಂದೆಗೆ ಪರಿಚಯವಿರುವ ವ್ಯಕ್ತಿ. ಶುಕ್ರವಾರ ಬಾಲಕಿಗೆ ಚಾಕಲೇಟ್ ಕೊಡಿಸುವ ಆಸೆ ತೋರಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ವೇಳೆ ಬಾಲಕಿ ಅಳಲು ಆರಂಭಿಸುತ್ತಿದ್ದಂತೆ ಆಕೆಯನ್ನು ಹೊಡೆದು ಕೊಲೆ ಮಾಡಿ, ಮೃತ ದೇಹವನ್ನು ಬೀಸಾಡಿ ಹೋಗಿದ್ದಾನೆ.
ಇತ್ತ ಬಾಲಕಿ ನಾಪತ್ತೆಯಾದ ಕುರಿತು ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಪಪ್ಪುನನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಆರೋಪಿ ತನ್ನ ತಪ್ಪು ಒಪ್ಪಿಕೊಂಡು ಕೃತ್ಯ ಎಸಗಿದ ಜಾಗಕ್ಕೆ ಪೊಲೀಸರನ್ನು ಕರೆದುಕೊಂಡು ಹೋಗಿದ್ದನು. ಆಗ ಬಾಲಕಿಯ ಮೃತದೇಹ ಪತ್ತೆಯಾಗಿದ್ದು, ಅದನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಆರೋಪಿ ಪಪ್ಪು ವಿರುದ್ಧ ಪೊಸ್ಕೊ ಸೇರಿದಂತೆ ಐಪಿಸಿ ಸೆಕ್ಷನ್ 364 (ಅಪಹರಣ), 376 (ಅತ್ಯಾಚಾರ) ಹಾಗೂ 302 (ಕೊಲೆ) ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
ಮುಗ್ಧ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಕಾಮುಕನಿಗೆ ಸೂಕ್ತ ಶಿಕ್ಷೆಯಾಗಬೇಕು ಎಂದು ಉತ್ತರ ಪ್ರದೇಶದ ವಿವಿಧ ಸಂಘಟನೆಗಳು, ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದಾರೆ.